ಕೆಥೊಲಿಕ್ ಸಭಾ ಮಂಗಳೂರು ಹಾಗೂ ಉಡುಪಿ ಪ್ರದೇಶ ರಿ. ಸಂಘಟನೆ ಜಂಟಿಯಾಗಿ ಪ್ರಕಟಿಸುತ್ತಿರುವ ‘ಆಮ್ಚೊ ಸಂದೇಶ್’ ಕೊಂಕಣಿ ಮಾಸಿಕ ಪತ್ರಿಕೆಯ ರಜತೋತ್ಸವ ಸಮಾರೋಪ ಸಮಾರಂಭ ಉಡುಪಿ ಶೋಕಮಾತಾ ದೇವಾಲಯದ ಸಭಾಂಗಣದಲ್ಲಿ ಮೇ 1 ರಂದು ಅದ್ದೂರಿಯಿಂದ ಜರುಗಿತು.
ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ|ವಂ| ಜೆರಾಲ್ಡ್ ಲೋಬೊ ಅವರು ದೀಪ ಬೆಳಗಿಸಿ ರಜತಮಹೋತ್ಸವ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿದರು.
ಪತ್ರಿಕೆಯ ಪ್ರಕಾಶಕರು ಹಾಗೂ ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ್ ರಿ. ಇದರ ಅಧ್ಯಕ್ಷರಾದ ಶ್ರೀ ಅನಿಲ್ ಲೋಬೊ ಫೆರ್ಮಾಯ್ ಅವರು ಅಧ್ಯಕ್ಷ ಸ್ಥಾನ ಅಲಂಕರಿಸಿದ ಈ ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯ ಉದ್ಯಮಿ ಶ್ರೀ ಲಿಯೊ ರೊಡ್ರಿಗಸ್ ಅಬುಧಾಬಿ ಮುಖ್ಯ ಅಥಿತಿಗಳಾಗಿ ಉಪಸ್ಥಿತರಿದ್ದರು. ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ರಿ. ಇದರ ಅಧ್ಯಕ್ಷರಾದ ಶ್ರೀ ವಲೇರಿಯನ್ ಫರ್ನಾಂಡಿಸ್, ಆಧ್ಯಾತ್ಮಿಕ ನಿರ್ದೇಶಕರಾದ ವಂ| ಫಾ| ಫರ್ಡಿನಾಂಡ್ ಗೊನ್ಸಾಲ್ವಿಸ್ ಅತಿಥಿಗಳಾಗಿ ಆಗಮಿಸಿದ್ದರು.
ಆರಂಭದಲ್ಲಿ ಪತ್ರಿಕೆ ಕಳೆದ 25 ವರ್ಷಗಳಿಂದ ಸಾಗಿ ಬಂದ ಹಾದಿಯ ಕಿರು ಪರಿಚಯವನ್ನು ಪತ್ರಿಕೆಯ ಪ್ರಸ್ತುತ ಸಂಪಾದಕ ಶ್ರೀ ವಿಲ್‍ಫ್ರೆಡ್ ಲೋಬೊ ಪಡೀಲ್ ನೀಡಿದರು.
ಧರ್ಮಾಧ್ಯಕ್ಷರಾದ ಅ| ವಂ| ಜೆರಾಲ್ಡ್ ಲೋಬೊ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಮಾತನಾಡಿ, ‘ಕಳೆದ 25 ವರ್ಷಗಳಿಂದ ಈ ಪತ್ರಿಕೆ ನಿರಂತರವಾಗಿ ಪ್ರಕಟಗೊಳ್ಳುತ್ತಿದೆ. ಬೇರೆಲ್ಲ ಕೊಂಕಣಿ ಪತ್ರಿಕೆಗಳಿಗಿಂತಲೂ ಈ ಪತ್ರಿಕೆ ಭಿನ್ನವಾಗಿದೆ. ಜನಸಾಮಾನ್ಯರಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಧಾರ್ಮಿಕ ವಿಚಾರಗಳಲ್ಲಿ ಜಾಗೃತಿ ಮೂಡಿಸುವ ಮಹತ್ತರ ಕಾರ್ಯವನ್ನು ಈ ಪತ್ರಿಕೆ ಮಾಡುತ್ತಾ ಬಂದಿದೆ. ಈ ಪತ್ರಿಕೆ ಕೊಂಕಣಿ ಭಾಶೆ, ಸಂಸ್ಕøತಿ ಹಾಗೂ ಸಾಹಿತ್ಯಕ್ಕೆ ದೇಣಿಗೆ ನೀಡುವುದರ ಜತೆಗೆ ಜಾಗೃತಿ ಮೂಡಿಸುವ ಮಹಾನ್ ಕಾರ್ಯವನ್ನು ನಡೆಸಲಿ” ಎಂದು ಶುಭಹಾರೈಸಿದರು.
ಮುಖ್ಯ ಅತಿಥಿ ಅಲ್‍ಮಜ್ರೋಯ್ ಆಂಡ್ ಕ್ಲೆವಿ ಅಬುಧಾಬಿ ಇದರ ಆಡಳಿತ ನಿರ್ದೇಶಕ ಶ್ರೀ ಲಿಯೊ ರೊಡ್ರಿಗಸ್ ಅಬುಧಾಬಿ ಅವರು ರಜತೋತ್ಸವ ಸ್ಮಾರಕ ಸಂಚಿಕೆ ಬಿಡುಗಡೆಗೊಳಿಸಿದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕøತ ಕೊಂಕಣಿ ಸಾಹಿತಿ ಶ್ರೀ ಎಡ್ವಿನ್ ಜೆ.ಎಫ್. ಡಿಸೋಜಾ, ಕೊಂಕಣಿ ಕವಿ; ಗೀತರಚನೆಕಾರ ಶ್ರೀ ವಿಲ್ಸನ್ ಕಟೀಲ್, ಹಿರಿಯ ಕೊಂಕಣಿ ಸಾಹಿತಿ ಹಾಗೂ ‘ಆಮ್ಚೊ ಸಂದೇಶ್’ ಪತ್ರಿಕೆಗೆ ನಿರಂತರ ಸಹಕಾರ ನೀಡುತ್ತಾ ಬಂದಿರುವ ಮಾಜಿ ಸಂಪಾದಕ ಡೊ| ಜೆರಾಲ್ಡ್ ಪಿಂಟೊ ನಿಡ್ಡೋಡಿ ಅವರನ್ನು ಈ ಸಂದರ್ಭದಲ್ಲಿ ಸಮ್ಮಾನಿಸಲಾಯಿತು.
ಪತ್ರಿಕೆಯ ಪ್ರಗತಿಗಾಗಿ ನಿಸ್ವಾರ್ಥ ಸೇವೆ ನೀಡಿದ ಮಾಜಿ ಸಂಪಾದಕರು ಹಾಗೂ ಪ್ರಕಾಶಕರನ್ನೂ ಈ ಸಂದರ್ಭ ಗೌರವಿಸಲಾಯಿತು. ಕಳೆದ ಸಾಲಿನಲ್ಲಿ ಪತ್ರಿಕೆಗೆ ಅತ್ಯಧಿಕ ಚಂದಾ ಸಂಗ್ರಹಿಸಿದ ಮಂಗಳೂರು ಧರ್ಮಪ್ರಾಂತ್ಯದ ಎಪಿಸ್ಕೊಪಲ್ ಸಿಟಿ ವಾರಾಡೊ ಹಾಗೂ ವಲೆನ್ಸಿಯಾ ಘಟಕ, ಉಡುಪಿ ಧರ್ಮಪ್ರಾಂತ್ಯದ ಕಲ್ಯಾಣ್ಪುರ್ ವಾರಾಡೊ ಹಾಗೂ ಮುದರಂಗಡಿ ಘಟಕಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀ ಅನಿಲ್ ಲೋಬೊ ಫೆರ್ಮಾಯ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪತ್ರಿಕೆಯ ಪ್ರಗತಿಗಾಗಿ ಶ್ರಮಿಸಿದ ಸಂಪಾದಕ ಹಾಗೂ ಪ್ರಕಾಶಕರ ಸೇವೆಯನ್ನು ಸ್ಮರಿಸಿದರು. ಕೊಂಕಣಿ ಪತ್ರಿಕೋದ್ಯಮದ ಉಳಿವಿಗಾಗಿ ಯುವ ಬರಹಗಾರರನ್ನು ರೂಪಿಸುವ ಕಾರ್ಯ ನಡೆಯಬೇಕಾಗಿದೆ ಎಂದರು.
ಕಥೊಲಿಕ್ ಸಭಾ ಮಾಜಿ ಅಧ್ಯಕ್ಷರಾದ ಶ್ರೀ ಆಲ್ಫೋನ್ಸ್ ಡಿಕೊಸ್ತಾ ಸ್ವಾಗತಿಸಿದರು. ಶ್ರೀ ವಾಲ್ಟರ್ ಸಿರಿಲ್ ಪಿಂಟೊ ವಂದಿಸಿದರು. ಶ್ರೀ ಡೊಲ್ಫಿ ಸಾಲ್ಡಾನ್ಹಾ ಕಾರ್ಯಕ್ರಮ ನಿರೂಪಿಸಿದರು.