News by Jaison Suares, Taccode
Photos by: Stanly Bantwal
ಮಂಗಳೂರು : ಮಹಿಳೆಯರು ಸೇವೆಯ ಮೂಲಕ ತಮ್ಮ ಅಸ್ಮಿತೆಯನ್ನು ಎತ್ತಿ ತೋರಿಸಿದ್ದಾರೆ ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅ| ವಂ| ಸ್ವಾ| ಅಲೋಶಿಯಸ್ ಪಾವ್ಲ್ ಡಿಸೋಜಾ ಹೇಳಿದರು.
ಅವರು ಭಾನುವಾರ ನಗರದ ಕಥೋಲಿಕ್ ಸಭಾ ಮಂಗ್ಳುರ್ ಪ್ರದೇಶ್ ಮುಂದಾಳುತ್ವದಲ್ಲಿ, ಕಥೊಲಿಕ್ ಸಭಾ ಉಡುಪಿ ಪ್ರದೇಶ್ ಮತ್ತು ಮಂಗಳೂರು ಧರ್ಮ ಪ್ರಾಂತ್ಯದ ಸ್ತ್ರೀಯರ ಮಂಡಳಿಯ ಸಹಯೋಗದಲ್ಲಿ 'ಪ್ರಗತಿಪರ ಸಮಾಜಕ್ಕಾಗಿ ಕೆನರಾ ಕಥೊಲಿಕ್ ಸ್ತ್ರೀಯರ ನಾಯಕತ್ವ' ಎಂಬ ಧ್ಯೇಯದಡಿ ಆಯೋಜಿಸಿದ ಕೆನರಾ ಕಥೋಲಿಕ್ ಸ್ತ್ರೀಯರ ಬೃಹತ್ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾವೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ ಮಹಿಳೆಯರನ್ನು ಅಭಿನಂದಿಸಿದ ಬಿಷಪ್ ಅವರು 'ಮಹಿಳೆಯರ ಸೇವೆ ಇತರರಿಗೆ ಮಾದರಿಯಾಗಲಿ' ಎಂದು ಹಾರೈಸಿದರು.
ಬೆಥನಿ ಸಂಸ್ಥೆಯ ಸಹ ಸುಪೀರಿಯರ್ ಜನರಲ್ ಸಿ| ಲಿಲ್ಲಿಸ್ ಬಿ.ಎಸ್. ಸಮಾವೇಶವನ್ನು ಉದ್ಘಾಟಿಸಿದರು.
ಕಥೋಲಿಕ್ ಸಭಾ ಮಂಗ್ಳುರ್ ಪ್ರದೇಶ್ ಕೇಂದ್ರೀಯ ಸಮಿತಿ ಅಧ್ಯಕ್ಷ ಅನಿಲ್ ಲೋಬೊ ಪ್ರಾಸ್ತಾವಿಕವಾಗಿ ಮಾತನಾಡಿ, ಕ್ರೈಸ್ತ ಸಮುದಾಯದ ಮಹಿಳೆಯರ ನಾಯಕತ್ವ ಸಮಾಜದ ಮುಖ್ಯ ವಾಹಿನಿಯಲ್ಲೂ ತೊಡಗಿಸಿಕೊಳ್ಳುವಂತಾದರೆ ಪ್ರಗತಿಪರ ಸಮಾಜ ನಿರ್ಮಾಣ ಸಾಧ್ಯ ಎಂದರು.
ಸಮಾಜ ಸೇವಕಿ, ಕೆಪಿಸಿಸಿ ಕಾರ್ಯದರ್ಶಿ ವೆರೊನಿಕಾ ಕರ್ನೆಲಿಯೊ ದಿಕ್ಸೂಚಿ ಭಾಷಣಕಾರರಾಗಿ ಮಾತನಾಡಿ, ಕ್ರೈಸ್ತ ಸಮುದಾಯದಲ್ಲಿ ಮಹಿಳೆಯರಿಗೆ ಸಮಾನ ಗೌರವವಿದ್ದು, ಎಲ್ಲಾ ರಂಗಗಳಲ್ಲೂ ಅತ್ಯುತ್ತಮ ನಾಯಕತ್ವ ವಹಿಸುತ್ತಿದ್ದಾರೆ. ತಮ್ಮ ಸೇವೆಯ ಮೂಲಕ ಸ್ತ್ರೀಯರು ಉತ್ತಮ ಕುಟುಂಬಗಳನ್ನು ಕಟ್ಟುತ್ತಿದ್ದು, ಜೊತೆಗೆ ಸಮಾಜದ ಮುಖ್ಯವಾಹಿನಿಯಲ್ಲಿ, ಸ್ವಸಹಾಯ ಸಹಕಾರಿ ರಂಗಗಳಲ್ಲೂ ಪ್ರಭಾವಿ ನಾಯಕತ್ವವನ್ನು ವಹಿಸಿಕೊಳ್ಳಬೇಕಿದೆ. ಕ್ರೈಸ್ತ ಸಮುದಾಯದ ಸ್ತ್ರೀಯರಿಗೆ ಸಮುದಾಯದಿಂದ ಉತ್ತಮ ಬೆಂಬಲ ಸಿಗುತ್ತಿದ್ದು, ಸಿಕ್ಕಿರುವ ಅವಕಾಶಗಳನ್ನು ಪ್ರಾಮಾಣಿಕವಾಗಿ ಬಳಸಿಕೊಂಡು, ಗುರುತಿಸಿಕೊಂಡು ನಾಯಕತ್ವದಲ್ಲಿ ಬೆಳೆಯುವಂತಾಗಬೇಕು ಎಂದರು.
ಈ ಸಂದರ್ಭದಲ್ಲಿ ಪ್ರೊ. ಸ್ಟೀವನ್ ಕ್ವಾಡ್ರಸ್ ಅವರು ಬರೆದ 'ಸ್ತ್ರೀಯರಿಗಾಗಿ ಸರಕಾರ' ಕೃತಿಯನ್ನು ಧರ್ಮಾಧ್ಯಕ್ಷರಾದ ಅ| ವಂ| ಸ್ವಾ| ಅಲೋಶಿಯಸ್ ಪಾವ್ಲ್ ಡಿಸೋಜಾ ಅವರು ಅನಾವರಣಗೊಳಿಸಿದರು. ಮಂಗಳೂರು ಧರ್ಮಪ್ರಾಂತ್ಯದ ಭಿಷಪ್ ಅ| ವಂ| ಸ್ವಾ| ಅಲೋಶಿಯಸ್ ಪಾವ್ಲ್ ಡಿಸೋಜಾ ಅವರನ್ನು ಕಥೋಲಿಕ್ ಸಭಾ ವತಿಯಿಂದ ಸನ್ಮಾನಿಸಲಾಯಿತು.
ಕರ್ನಾಟಕ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ ಅವರು ಮಾತನಾಡಿ 'ಜಿಲ್ಲೆಯ ಇತಿಹಾಸದಲ್ಲಿ ಇದೊಂದು ಚಾರಿತ್ರಿಕ ಸಮಾವೇಶ. ಕ್ರೈಸ್ತ ಸಮುದಾಯ ದೇಶದಲ್ಲಿ ಕೇವಲ 2% ವಾಗಿದ್ದರೂ, ರಾಷ್ಟ್ರವನ್ನು ಮುನ್ನಡೆಸುವಲ್ಲಿ ಕ್ರೈಸ್ತ ಸಮಾಜದ ಕೊಡುಗೆ ಗಣನೀಯವಾದುದು. ಸೇವಾ ಮನೋಭಾವದ ಜೊತೆಗೆ ಕ್ರೈಸ್ತ ಸಮುದಾಯದ ಒಗ್ಗಟ್ಟು ಕೂಡಾ ಹೆಚ್ಚಬೇಕು' ಎಂದರು.
ಈ ಸಂದರ್ಭ ಮಾತನಾಡಿದ ಶಾಸಕ ಜೆ.ಆರ್. ಲೋಬೊ ಅವರು 'ಸ್ತ್ರೀಯರಿಗೆ ಪ್ರಾಶಸ್ತ್ಯ ನೀಡುವ ಸಮಾಜ ಬಲಿಷ್ಠವಾಗುತ್ತದೆ' ಎಂದರು.
ಸಮಾವೇಶದಲ್ಲಿ ಕೆನರಾ ಕಥೋಲಿಕ್ ಸಮುದಾಯದ ಸಾಧಕಿಯರಾದ ಪಾವ್ಲಿನ್ ಫ್ಲೋಸ್ಸಿ ಪಿಂಟೊ ತಾಕೊಡೆ (ಕೃಷಿ), ಜೆಸ್ಲಿನ್ ಎಲಿಜಬೆತ್ ಮೇರಿ ಲುವಿಸ್ (ವಿಶೇಷ ಸಾಮಥ್ರ್ಯದ ಸ್ತ್ರೀ), ಕು| ಜುಲಿಯಾನಾ ಲೋಬೊ ದೆರೆಬೈಲ್ (ಶಿಕ್ಷಣ ಕ್ಷೇತ್ರ), ಇವ್ಲಾಲಿಯಾ ಡಿಸೋಜಾ ಬಿಜೈ (ಉದ್ಯಮ), ಲಿನೆಟ್ ಕ್ಯಾಸ್ತೆಲಿನೋ ನಿತ್ಯಾಧರ್‍ನಗರ (ಸರಕಾರಿ ಸೇವೆ), ಮೇರಿ ವಾಸ್ ದೆರೆಬೈಲ್ (ಆರೋಗ್ಯ ಕ್ಷೇತ್ರ), ಮರ್ಲಿನ್ ರಸ್ಕಿನ್ಹಾ ನಾಗೊರಿ (ಸಾಹಿತ್ಯ ಮತ್ತು ಕಲೆ), ವಾಯ್ಲೆಟ್ ಜೆ. ಪಿರೇರಾ ಬೆಂದುರ್ (ವೃತ್ತಿಪರ ಕ್ಷೇತ್ರ), ಕು| ರೆಮಿಡಿಯಾ ಡಿಸೋಜಾ ಬೆಳ್ಮಣ್ (ಸಮಾಜ ಸೇವೆ), ಜೋಯ್ಲಿನ್ ಮ್ಯೂರಲ್ ಲೋಬೊ ಶಿರ್ತಾಡಿ (ಕ್ರೀಡಾ ಕ್ಷೇತ್ರ) ಅವರಿಗೆ ಕಥೊಲಿಕ್ ಸಭಾ ಸ್ತ್ರೀ ಸಾಧನ್ ಪ್ರಶಸ್ತಿ 2018 ಪ್ರದಾನ ಮಾಡಲಾಯಿತು. ಸನ್ಮಾನಿತರ ಪರವಾಗಿ ಲಿನೆಟ್ ಕ್ಯಾಸ್ತೆಲಿನೋ ಮಾತನಾಡಿದರು.
ಐಆರ್‍ಎಸ್ ಅಧಿಕಾರಿ ಕ್ವೀನಿ ಮಿಶಲ್ ಡಿಕೋಸ್ತಾ ಅವರು ಮಾತನಾಡಿ 'ನಾವು ಬದುಕನ್ನು ವ್ಯಾವಹಾರಿಕ ದೃಷ್ಟಿಯಿಂದ ಮಾತ್ರ ನೋಡದೆ ಸಮಾಜದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಶ್ರಮಿಸಬೇಕಿದೆ. ಕರಾವಳಿಯ ಸ್ತ್ರೀಯರು ಪ್ರತಿಭಾವಂತರಾಗಿದ್ದು ಪುರುಷರಿಗೆ ಸಮನಾಗಿದ್ದಾರೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಅವಿರತ ಶ್ರಮವಹಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕಿದೆ' ಎಂದರು.
ಮಾಡೆಲ್ ಕೋಆಪರೇಟಿವ್ ಬ್ಯಾಂಕ್‍ನ ಚೇರ್‍ಮೆನ್ ಆಲ್ಬರ್ಟ್ ಡಿಸೋಜಾ ಕಥೋಲಿಕ್ ಸಭಾ ಅಜೀವ ಸದಸ್ಯತ್ವ ಕಾರ್ಡ್ ಅನಾವರಣಗೊಳಿಸಿದರು.
ಮಂಗಳೂರು ಧರ್ಮಪ್ರಾಂತ್ಯ ಪಾಲನಾ ಸಮಿತಿ ಕಾರ್ಯದರ್ಶಿ ಎಂ.ಪಿ. ನೊರೋನ್ಹಾ, ಎಪಿಸ್ಕೋಪಲ್ ಸಿಟಿ ವಲಯದ ಪ್ರಧಾನ ಧರ್ಮಗುರು ವಂ| ಸ್ವಾ| ಜೆ.ಬಿ. ಕ್ರಾಸ್ತಾ, ಕಥೋಲಿಕ್ ಸಭಾ ಮಂಗಳೂರು ಧರ್ಮ ಪ್ರಾಂತ್ಯದ ಆಧ್ಯಾತ್ಮಿಕ ನಿರ್ದೇಶಕ ವಂ| ಸ್ವಾ| ಮ್ಯಾಥ್ಯೂ ವಾಸ್, ಪ್ರಧಾನ ಕಾರ್ಯದರ್ಶಿ ಸೆಲೆಸ್ತಿನ್ ಡಿಸೋಜಾ, ಸ್ತ್ರೀ ಸಶಕ್ತೀಕರಣ ಸಮಿತಿಯ ಸಂಚಾಲಕಿ ಶರಲ್ ಡಿಸೋಜಾ, ಕಥೊಲಿಕ್ ಸಭಾ ಉಡುಪಿ ಧರ್ಮಪ್ರಾಂತ್ಯದ ಆಧ್ಯಾತ್ಮಿಕ ನಿರ್ದೇಶಕ ವಂ| ಸ್ವಾ| ಫರ್ಡಿನಾಂಡ್ ಗೊನ್ಸಾಲ್ವಿಸ್, ಅಧ್ಯಕ್ಷ ವಲೇರಿಯನ್ ಆರ್. ಫೆರ್ನಾಂಡಿಸ್, ಕಾರ್ಯದರ್ಶಿ ಜೆಸಿಂತಾ ಕೊಲಾಸೊ, ಸ್ತ್ರೀ ಮಂಡಳಿಯ ಆಧ್ಯಾತ್ಮಿಕ ನಿರ್ದೇಶಕ ವಂ| ಸ್ವಾ| ಫ್ರಾನ್ಸಿಸ್ ಡಿಸೋಜಾ, ಅಧ್ಯಕ್ಷ ಟೆರಿ ಪಾಯ್ಸ್, ಕಾರ್ಯದರ್ಶಿ ಗ್ರೆಟ್ಟಾ ಪಿಂಟೊ ಕಥೋಲಿಕ್ ಸಭಾ ವಲಯಾಧ್ಯಕ್ಷರುಗಳು, ವಲಯ ಸ್ತ್ರೀ ಹಿತಾ ಸಂಚಾಲಕಿಯರು, ಕಥೋಲಿಕ್ ಸಭಾದ ನಾಯಕರು ಮತ್ತಿತರರಿದ್ದರು.
ಸಮಾವೇಶದಲ್ಲ್ಲಿ 6000ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು.
ಡೋಲ್ಫಿ ಸಲ್ಡಾನ್ಹಾ ಮತ್ತು ಸುಜಾತಾ ಮೆಂಡೋನ್ಸಾ ಕಾರ್ಯಕ್ರಮ ನಿರೂಪಿಸಿದರು. ಶರಲ್ ಡಿಸೋಜಾ ವಂದಿಸಿದರು.